ಬೆಂಗಳೂರಿನ ಶೀಲವಂತ ಕೆರೆಗೆ ಕೊಳಚೆ ನೀರು ನುಗ್ಗಿ ಸಾವಿರಾರು ಮೀನುಗಳು ಸಾವು ಕಳೆದ ವಾರ ಸುರಿದ ಮಳೆಗೆ ನಲ್ಲೂರಹಳ್ಳಿ ಕಡೆಯಿಂದ ಒಳಚರಂಡಿ(ಯುಜಿಡಿ) ನೀರು ಕೆರೆಗೆ ಸೇರುತ್ತಿರುವುದೇ ಮೀನುಗಳ ಸಾವಿಗೆ ಕಾರಣ ಎಂದು ನಿವಾಸಿಗಳು ಹಾಗೂ ಸ್ಥಳೀಯರು ತಿಳಿಸಿದ್ದಾರೆ. ಬೆಂಗಳೂರು: ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಶೀಲವಂತ ಕೆರೆಗೆ ಕೊಳಚೆ ನೀರು ನುಗ್ಗಿ ಸಾವಿರಾರು ಮೀನುಗಳು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.ಕಳೆದ ವಾರ ಸುರಿದ ಮಳೆಗೆ ನಲ್ಲೂರಹಳ್ಳಿ ಕಡೆಯಿಂದ ಒಳಚರಂಡಿ(ಯುಜಿಡಿ) ನೀರು ಕೆರೆಗೆ ಸೇರುತ್ತಿರುವುದೇ ಮೀನುಗಳ ಸಾವಿಗೆ ಕಾರಣ ಎಂದು ನಿವಾಸಿಗಳು ಹಾಗೂ ಸ್ಥಳೀಯರು ತಿಳಿಸಿದ್ದಾರೆ. ಅಲ್ಲದೆ ಕೆರೆ ಈಗ ಗಬ್ಬು ನಾರುತ್ತಿದೆ ಎಂದು ದೂರಿದ್ದಾರೆ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಕೆರೆಗಳ ವಿಭಾಗದ ಅಧಿಕಾರಿಗಳು, ಕಲುಷಿತ ಕೆರಯಲ್ಲಿ ಆಮ್ಲಜನಕ(ಡಿಒ) ಮಟ್ಟವು ಕಡಿಮೆಯಾಗುವುದರಿಂದ ಮೀನುಗಳು ಸಾಯುತ್ತವೆ ಎಂದು ಹೇಳಿದ್ದಾರೆ.ಕೊಳಚೆ ನೀರು ಹರಿಯದಂತೆ ಕೆರೆಗೆ 1.25 ಮೀಟರ್‌ ವ್ಯಾಸದ ಪೈಪ್‌ ಅಳವಡಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದು, ಮಂಜೂರಾತಿಗಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಹಿಂದೆಯೂ ಕೆರೆಗೆ ಕೊಳಚೆ ನೀರು ನುಗ್ಗುತ್ತಿರುವ ಬಗ್ಗೆ ವರದಿಯಾಗಿದ್ದರೂ ಬಿಬಿಎಂಪಿ ಕೆರೆಗಳ ವಿಭಾಗವು ಜಲಮೂಲವನ್ನು ಅಭಿವೃದ್ಧಿಪಡಿಸಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ."ಅಧಿಕಾರಿಗಳು ಪ್ರಸ್ತಾವನೆ ಕಳುಹಿಸಿರುವುದಾಗಿ ಹೇಳುತ್ತಲೇ ಇರುತ್ತಾರೆ. ಆದರೆ ಅವರು ಎಂದಿಗೂ ಸಮಸ್ಯೆ ಪರಿಹರಿಸುವುದಿಲ್ಲ. ಬಿಬಿಎಂಪಿ ಮತ್ತು ಬಿಡಬ್ಲ್ಯುಎಸ್‌ಎಸ್‌ಬಿ ನಡುವೆ ಸಮನ್ವಯತೆ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ’ ಎಂದು ಕೆರೆ ಬಳಿ ನಿತ್ಯ ಸಂಚರಿಸುವ ನಲ್ಲೂರಹಳ್ಳಿ ನಿವಾಸಿ ರಾಜಶೇಖರ್‌ ರೆಡ್ಡಿ ಹೇಳಿದ್ದಾರೆ.ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಮುಖಂಡ ನಲ್ಲೂರಹಳ್ಳಿ ನಾಗೇಶ್, ಮಹದೇವಪುರ ವಲಯದ ಜಲಾನಯನ ಪ್ರದೇಶಗಳಿಗೆ ತಕ್ಷಣ ಗಮನ ಹರಿಸಬೇಕು. ''ಈಗಿನ ಮತ್ತು ಹಿಂದಿನ ಶಾಸಕರು ಯಾವುದೇ ಅಭಿವೃದ್ಧಿ ಮಾಡಿಲ್ಲ ಮತ್ತು ಕ್ಷೇತ್ರದ ವಿರೋಧ ಪಕ್ಷದ ನಾಯಕರು ಮೌನವಾಗಿದ್ದಾರೆ. ಹೀಗಾಗಿ ಇಂತಹ ದೂರುಗಳು ಬಂದಾಗ ಅಧಿಕಾರಿಗಳು ಜನರಿಗೆ ಸ್ಪಂದಿಸುವುದಿಲ್ಲ'' ಎಂದು ಆರೋಪಿಸಿದರು.ಸತ್ತ ಮೀನುಗಳನ್ನು ತೆರವುಗೊಳಿಸಲು, ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಮತ್ತು ಕೆಸರು ಸ್ವಚ್ಛಗೊಳಿಸಲು ಕಾರ್ಮಿಕರನ್ನು ನಿಯೋಜಿಸಲಾಗಿದೆ ಎಂದು ಬಿಬಿಎಂಪಿ ಸಹಾಯಕ ಎಂಜಿನಿಯರ್(ಕೆರೆ ವಿಭಾಗ) ಸಪ್ನಾ ಎನ್.ಕೆ. ಅವರು ತಿಳಿಸಿದ್ದಾರೆ."ನೀರಿನಲ್ಲಿ ಮಟ್ಟವನ್ನು ಸುಧಾರಿಸುವ ಪ್ರಯತ್ನಗಳು ನಡೆಯುತ್ತಿವೆ. ನಲ್ಲೂರಹಳ್ಳಿ ಕಡೆಯಿಂದ ಒಳಹರಿವಿನಲ್ಲಿ ಕೆರೆಯ ಉದ್ದಕ್ಕೂ 1.25 ಮೀಟರ್ ವ್ಯಾಸದ ಪೈಪ್ ಅಳವಡಿಸುವುದು ದೀರ್ಘಾವಧಿಯ ಪರಿಹಾರವಾಗಿದೆ. ಪ್ರಸ್ತಾವನೆ ಅಂಗೀಕಾರವಾದ ನಂತರ ವರ್ಕ್ ಆರ್ಡರ್ ನೀಡಲಾಗುವುದು ಮತ್ತು ಆದ್ಯತೆಯ ಮೇಲೆ ಕೆಲಸ ಕೈಗೆತ್ತಿಕೊಳ್ಳಲಾಗುವುದು” ಎಂದು ಅವರು ಹೇಳಿದರು.